ಕಳೆದವೆಷ್ಟೋ ತಿಂಗಳು
ಅತ್ತು ಬಾಡಿವೆ ಎನ್ನ ಕಂಗಳು
ನಿನ್ನದೇ ಧ್ಯಾನ ಹಗಲು ಇರುಳು
ತಣಿಯಲಿಲ್ಲ ಮನದ ಮರುಳು
ನೀನಿಲ್ಲದ ಎನ್ನ ಎದೆಯಂಗಳ
ಮೋಡ ಕವಿದ ಬಾಂದಳ
ಅನಿಸುತಿದೆ ಎದೆ ಭಾರ ಭಾರ
ಇದ ಹೊತ್ತು ಸಾಗುವೆನೆ ನಾ ದೂರ ದೂರ?
ಎಲೆ ನನ್ನ ಬಿಳುಪು ಗಲ್ಲದ ನಲ್ಲೆ,
ನಿನ್ನ ಗುಳಿಕೆನ್ನೆಯ ನಗೆಗಾಗಿ ಕಾಯುತಿರುವೆನಿಲ್ಲೇ
ನಿನ್ನ ಬಾಗಿದ ಬಿಲ್ಲಿನಂತಿರುವ ಹುಬ್ಬು
ಹಿಡಿಸುತಿದೆ ನನ್ನಲ್ಲಿ ಪ್ರೇಮದ ಮಬ್ಬು
ನಿನ್ನ ಮುಂಗುರುಳ ಉರುಳು
ಅದ ಸರಿಸುವ ನಿನ್ನ ಬೆರಳು
ಮಚ್ಚೆಯಿರುವ ನಿನ್ನ ಕೊರಳು
ಇದರ ಮುಂದೆ ನಾಚಬೇಕು ವಜ್ರದ ಹರಳು
ನಿನ್ನ ನುಣುಪಿನ ಕೆನ್ನೆಗೆ
ಹೂ ಮುತ್ತು ಇಟ್ಟಾಗ ಒಮ್ಮೆಗೆ
ನೀ ಸೂಸುವ ಹೂನಗೆ
ಸಾಕ್ಷಿಯಾಯಿತು ನಮ್ಮೀರ್ವರ ಪ್ರೇಮಕೆ
ನಿನ್ನ ಬಿಳುಪು ಗಲ್ಲಕೆ ತಾಕಿದ ಅಂಗಿಯ ಮಿಂಚು
ತೋರುತಿತ್ತು ಶುಭ್ರ ಬಾನಿನ ನಕ್ಷತ್ರದಂತೆ
ಮಿನುಗುತಿತ್ತು ಸ್ವರ್ಣದಲ್ಲಿಟ್ಟ ವಜ್ರದ ಬೊಟ್ಟಿನಂತೆ
ಆದರೆ ಅದನ ಸೋಲಿಸುತಲಿತ್ತು ನಿನ್ನ ಕಂಗಳ ಮಿಂಚು
Monday, March 26, 2007
Wednesday, March 14, 2007
ನನ್ನೆದೆ
ನೀನು ಬಿಟ್ಟು ಹೋದ ನನ್ನೆದೆ
ದೇವನಿಲ್ಲದ ಪಾಳು ದೇಗುಲವಾಗಿದೆ.
ನನ್ನೆದೆಯ ರಕ್ತ ಭಯವಾಯಿತೆ ನಿನಗೆ?
ನನ್ನ ಬಿಸಿಯುಸಿರು ತಾಳಲಾಗಲಿಲ್ಲವೆನಿನಗೆ?
ನೀನಿರುವಾಗ ನಿತ್ಯೋತ್ಸವ ನನ್ನೆದೆಯಲ್ಲಿ
ಈಗಿದೆ ಅದು ನನ್ನೆದೆಯಾಳದ ನೆನಪಲ್ಲಿ
ನಿನ್ನ ನಗೆಯ ಘಂಟಾನಾದವಿಲ್ಲ, ಪಿಸು ಮಾತಿನ ಮಂತ್ರವಿಲ್ಲ
ನಿನ್ನ ಸಿಹಿ ಮುತ್ತಿನ ಪಂಚಾಮೃತ ಅಭಿಷೇಕಗಳಿಲ್ಲ
ನೀನಿಲ್ಲದ ನನ್ನೆದೆ ಮೂರು ಕಾಸಿನ ಬೆಲೆ ಕಾಣದೆ
ಅವರಿವರು ಭೇಟಿಕೊಡುವ ಪಾಳು ಸ್ಮಾರಕವಾಗಿದೆ.
ನೀನು ಮತ್ತೆ ನನ್ನೆದೆಗೆ ಬಂದು ಸೇರಬಹುದೇ?
ಮತ್ತೆ ನನ್ನೆದೆಯಲಿ ನಿತ್ಯೋತ್ಸವ ನಡೆಯಬಹುದೇ?
ನನ್ನೆದೆಯ ಕದ ಸದಾ ನಿನಗಾಗಿ ತೆರೆದಿದೆ
ನೀ ಒಮ್ಮೆ ತಿರುಗಿ ನೋಡಬಾರದೆ?
Subscribe to:
Posts (Atom)